ಚಿತ್ರಕೂಟ -
ಪುರಾಣಪ್ರಸಿದ್ಧವಾದ ಒಂದು ಪರ್ವತ ; ಒಂದು ಪ್ರಾಚೀನ ಪುಣ್ಯಕ್ಷೇತ್ರ. ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿದೆ. ಝಾನ್ಸಿ, ಮಣಿಪುರ ರೈಲುಮಾರ್ಗದಲ್ಲಿ ಚಿತ್ರಕೂಟ ಎಂಬ ರೈಲು ನಿಲ್ದಾಣ ಈ ಪರ್ವತದಿಂದ ನಾಲ್ಕು ಮೈಲು ದೂರದಲ್ಲಿದೆ. ಇದರ ಸಮೀಪದಲ್ಲಿ ಷಯೋಷ್ಣೀನದಿ ಹರಿಯುತ್ತದೆ. ರಾಮ, ಲಕ್ಷಣ, ಸೀತೆ ವನವಾಸಕ್ಕೆ ಹೊರಟಾಗ ಅವರ ಮೊದಲ ನಿಲ್ದಾಣವಾದದ್ದು ಈ ಚಿತ್ರಕೂಟ ಪರ್ವತ. ಇಲ್ಲವರು ಆಶ್ರಮವನ್ನು ಕಟ್ಟಿ ವಾಸಿಸುತ್ತಿರುವಾಗ ಭರತ ಬಂದು ದಶರಥನ ಮರಣವಾರ್ತೆಯನ್ನು ತಿಳಿಸಿ ರಾಮನನ್ನು ಅಯೋಧ್ಯೆಗೆ ಹಿಂದಿರುಗಿಸಲು ಪ್ರಯತ್ನಿಸಿ ಸೋತು ಕೊನೆಗೆ ಅಣ್ಣನ ಪಾದುಕೆಗಳನ್ನು ತೆಗೆದುಕೊಂಡು ಹೋಗಿ ರಾಮನ ಪ್ರತಿನಿಧಿಯಾಗಿ ತಾನು ರಾಜ್ಯವಾಳಿದ. ಕಾಕಾಸುರನ ಪ್ರಕರಣ ನಡೆದದ್ದೂ ಇಲ್ಲಿಯೇ. ಇದರಿಂದಾಗಿಯೇ ಚಿತ್ರಕೂಟ ಪರ್ವತ ಶ್ರೀರಾಮಕ್ಷೇತ್ರವಾಗಿ ಪ್ರಸಿದ್ಧವಾಯಿತು. 

ರಾಮಾಯಣವಲ್ಲದೆ ಮಹಾಭಾರತ, ಬೃಹತ್‍ಸಂಹಿತೆ ಮುಂತಾದ ಗ್ರಂಥಗಳಲ್ಲೂ ಚಿತ್ರಕೂಟದ ಉಲ್ಲೇಖ ಬಂದಿದೆ. ಈ ಪುಣ್ಯಕ್ಷೇತ್ರದಲ್ಲಿ ಧರ್ಮರಾಜ ತಪಸ್ಸು ಮಾಡಿದ. ನಳ ಇಲ್ಲಿಯೇ ತಪಸ್ಸುಮಾಡಿ ಕಳೆದುಹೋದ ತನ್ನ ರಾಜ್ಯವನ್ನು ಮತ್ತೆ ಪಡೆದ.

ಪ್ರಮೋದವನ, ಸ್ಫಟಿಕಶಿಲಾ, ಕಾಮತಾನಾಥ, ಗುಪ್ತಗೋದಾವರಿ, ಜಾನಕೀ ಕುಂಡ, ಭರತಕೂಪ, ಹನುಮಾನ್‍ಧಾರಾ, ರಾಮಶಯ್ಯ-ಇವು ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳು. ಹನುಮಾನ್‍ಧಾರೆಯ ನೀರಿನಲ್ಲಿ ಸ್ನಾನಮಾಡುವುದರಿಂದ ಕುಷ್ಠರೋಗ ಪರಿಹಾರವಾಗುತ್ತದೆಂದು ನಂಬಲಾಗಿದೆ. ರಾಮನವಮಿ, ದೀಪಾವಳಿ ಮತ್ತು ಕಾರ್ತಿಕ ಅಮವಾಸ್ಯೆಯಂದು ಇಲ್ಲಿ ದೊಡ್ಡ ಜಾತ್ರೆ ಸೇರುತ್ತದೆ.										(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ